23 December 2024

ಸಾರ್ವತ್ರಿಕ ಶಿಕ್ಷಣ, ಸಮಾನತೆ, ಸೌಹಾರ್ದತೆಗಾಗಿ ಎಸ್ಎಫ್ಐ ರಾಜ್ಯ ಸಮ್ಮೇಳನ

ಸಾರ್ವತ್ರಿಕ ಶಿಕ್ಷಣ, ಸಮಾನತೆ, ಸೌಹಾರ್ದತೆಗಾಗಿ ಎಸ್ಎಫ್ಐ ರಾಜ್ಯ ಸಮ್ಮೇಳನ ಹಾಗೂ ಪೋಸ್ಟರ್ ಬಿಡುಗಡೆ: ತಾಲೂಕಾಧ್ಯಕ್ಷ ಗ್ಯಾನೇಶ್ ಕಡಗದ

ಗಂಗಾವತಿ : ಸಾರ್ವರ್ತಿಕ ಶಿಕ್ಷಣ, ಸಮಾನತೆ, ಸೌಹಾರ್ದತೆಗಾಗಿ ಸೆಪ್ಟೆಂಬರ್ 26, 27, 28 ರಂದು ಚಿಕ್ಕಬಳ್ಳಾಪುರ ದಲ್ಲಿ ಎಸ್ಎಫ್ಐ ರಾಜ್ಯ ಸಮ್ಮೇಳನ

ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಕರ್ನಾಟಕ ರಾಜ್ಯ ಸಮ್ಮೇಳನ ನಡೆಯಲಿದ್ದು, ಸಮಿತಿಯಿಂದ ಸಮ್ಮೇಳನದ ಪೋಸ್ಟರ್ ನ್ನು ಗಂಗಾವತಿಯ ಶ್ರೀ ಕೃಷ್ಣ ದೇವರಾಯ ಸರ್ಕಲ್ ನಲ್ಲಿ ಬಿಡುಗಡೆ ಮಾಡಲಾಯಿತು.

ಈ ವೇಳೆ ಮಾತನಾಡಿದ ರಾಜ್ಯಾದ್ಯಕ್ಷ ಅಮರೇಶ ಕಡಗದ್, ಭಾರತ ವಿದ್ಯಾರ್ಥಿ ಫೆಡರೇಷನ್ (SFI) ದೇಶದ ಅತಿದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿದೆ. ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಮಾಜವಾದದ ಆಶಯಗಳನ್ನೊತ್ತು, ವಿದ್ಯಾರ್ಥಿಗಳನ್ನು ಅಭ್ಯಾಸ, ಹೋರಾಟ ಮತ್ತು ತ್ಯಾಗ ಎಂಬ ಘೋಷವಾಕ್ಯದಡಿಯಲ್ಲಿ ದೇಶದ ಐಕ್ಯತೆ, ಸಮಗ್ರತೆ ಹಾಗೂ ಸೌಹಾರ್ದತೆಯ ಉಳಿವಿಗಾಗಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುತ್ತಿರುವ ದೇಶದ ಅತಿದೊಡ್ಡ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆಯಾಗಿದೆ. ಬಡ, ಕೃಷಿ ಕೂಲಿಕಾರ್ಮಿಕರ, ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕಾಗಿ ನಿರಂತರ ಹೋರಾಟ ರೂಪಿಸುತ್ತಿದೆ. ಸರ್ವರಿಗೂ ಶಿಕ್ಷಣ, ಸರ್ವರಿಗೂ ಉದ್ಯೋಗಕ್ಕಾಗಿ ಶ್ರಮಿಸುತ್ತಿದೆ ಎಂದರು.

ಆಳುವ ಸರ್ಕಾರಗಳು ದೇಶದ ಮತ್ತು ರಾಜ್ಯ ಬಜೆಟ್ ನಲ್ಲಿ ಶಿಕ್ಷಣಕ್ಕೆ ವರ್ಷದಿಂದ ವರ್ಷಕ್ಕೆ ಹಣಕಾಸನ್ನು ಕಡಿತ ಮಾಡುತ್ತಾ ಶಿಕ್ಷಣವನ್ನು ಬಲಹೀನಗೊಳಿಸಲಾಗುತ್ತಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚುವ ಇಲ್ಲವೆ ಇತರೆ ಶಾಲೆಗಳೊಂದಿಗೆ ವಿಲೀನಗೊಳಿಸುವ ಮೂಲಕ ವಿದ್ಯಾರ್ಥಿಗಳನ್ನು ಬಲವಂತವಾಗಿ ಖಾಸಗೀ ಶಾಲೆಗಳಿಗೆ ಸೇರಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಸೃಷ್ಟಿಸುತ್ತಿದ್ದಾರೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಸಿಗುತ್ತಿದ್ದ ಬೈಸಿಕಲ್, ಪ್ರೋತ್ಸಾಹಧನ ದಂತಹ ಯೋಜನೆಗಳನ್ನು ಕೈಬಿಡಲಾಗುತ್ತಿದೆ. ಸರ್ಕಾರಿ ಶಾಲೆಯ ಮಕ್ಕಳಿಂದ ಹಣ ಸಂಗ್ರಹಣೆಗೆ ಮುಂದಾಗಿ ಖಾಸಗಿ ಶಾಲೆಗಳ ಪರವಾಗಿ ಯೋಜನೆಗಳನ್ನು, ಸಹಾಯಧನವನ್ನು ಬಿಡುಗಡೆಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳ ಪಾಲು ಪ್ರತೀ ವರ್ಷ ಹೆಚ್ಚಾಗುತ್ತಲೇ ಇದೆ. ಹೊಸ ಉನ್ನತ ಶಿಕ್ಷಣ ಸಂಸ್ಥೆಗಳು ಬಹುಮಟ್ಟಿಗೆ ಖಾಸಗಿಯವರಿಂದಲೇ ನಿರ್ವಹಿಸಲ್ಪಡುತ್ತಿವೆ. ಸಾರ್ವಜನಿಕ ಮತ್ತು ಅನುದಾನಿತ ವಿಶ್ವವಿದ್ಯಾಲಯಗಳಲ್ಲಿ ಶುಲ್ಕಗಳ ವಿಪರೀತ ಹೆಚ್ಚಳ ಹಾಗೂ ಮೂಲ ಸೌಲಭ್ಯಗಳು ಮರೀಚಿಕೆಯಾಗಿರುವುದು ಹಾಗೂ ಖಾಯಂ ಶಿಕ್ಷಕರು ಹಾಗೂ ಉಪನ್ಯಾಸಕರ ಕೊರತೆಯ ಕಾರಣ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಖಾಸಗಿ ವಿಶ್ವವಿದ್ಯಾಲಯಗಳತ್ತ ಮುಖಮಾಡುತ್ತಿದ್ದಾರೆ ಎಂದರು.

ಅಧ್ಯಕ್ಷ ಗ್ಯಾನೇಶ್ ಕಡಗದ ಮಾತನಾಡಿ, ಬಡ,ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳಿಗೆ ಸಿಗಬೇಕಾದ ವಿದ್ಯಾರ್ಥಿ ವೇತನ, ಫೆಲೋಷಿಪ್ ಗಳನ್ನು ನಿಲ್ಲಿಸಲಾಗುತ್ತಿದೆ. ವೃತ್ತಿ ಶಿಕ್ಷಣದ ತರಬೇತಿಗಳ ಹೆಸರಿನಲ್ಲಿ ದುಬಾರಿ ಖಾಸಗೀ ಕೇಂದ್ರಗಳು ಹುಲುಸಾಗಿ ಬೆಳೆಯುತ್ತಿವೆ. ದುಬಾರಿ ಶಿಕ್ಷಣ ಹಾಗೂ ಮಾನಸಿಕ ಒತ್ತಡಗಳ ಪರಿಣಾಮ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

ಶೈಕ್ಷಣಿಕ ಕ್ಷೇತ್ರದ ಮೇಲೆ ನಡೆಯುತ್ತಿರುವ ಈ ಎಲ್ಲಾ ದಾಳಿಗಳನ್ನು ಹಿಮ್ಮೆಟ್ಟಿಸಲು ಹಾಗೂ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಲು ಮತ್ತು ವಿದ್ಯಾರ್ಥಿಗಳ ಸೌಹಾರ್ದತೆಗಾಗಿ ಆಗ್ರಹಿಸಿ ಚಿಕ್ಕಬಳ್ಳಾಪುರ ನಗರದಲ್ಲಿ 26,27,28 ಸೆಪ್ಟೆಂಬರ್ 2024 ರಂದು ಮೂರು ದಿನಗಳ ಕಾಲ ನಡೆಯುವ ಎಸ್.ಎಫ್.ಐ. 16 ನೇ ರಾಜ್ಯ ಸಮ್ಮೇಳನದಲ್ಲಿ ಚರ್ಚೆ ಮಾಡಿ ಸಾರ್ವತ್ರಿಕ ಶಿಕ್ಷಣದ ಪರವಾಗಿ ಶೈಕ್ಷಣಿಕ ನಿರ್ಣಯಗಳನ್ನು ಕೈಗೊಳ್ಳಲಾಗುವುದು. ವಿದ್ಯಾರ್ಥಿ ಚಳುವಳಿಗೆ ಸಲಹೆ, ಸಹಕಾರ, ಪ್ರೋತ್ಸಾಹ ನೀಡುತ್ತಾ ಬಂದಿರುವ ವಿದ್ಯಾರ್ಥಿ ಸ್ನೇಹಿತರು, ಶಿಕ್ಷಕ-ಉಪನ್ಯಾಸಕರು, ಸಾಹಿತಿಗಳು, ಶಿಕ್ಷಣ ಪ್ರೇಮಿಗಳು, ಪ್ರಗತಿಪರರು, ಬುದ್ದಿಜೀವಿಗಳು, ಸಮಾನತೆ-ಸೌಹಾರ್ದತೆ ಬಯಸುವ ಎಲ್ಲಾ ಜೀವಪರ ಚಳುವಳಿಗಾರರು ಈ ಸಮ್ಮೇಳನದ ಯಶಸ್ವಿಗೆ ಸಂಪೂರ್ಣ ಸಹಕಾರವನ್ನು ನೀಡಬೇಕೆಂದು 16 ನೇ ರಾಜ್ಯ ಸಮಿತಿ ಮನವಿ ಮಾಡಿದೆ‌.

ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಶಿವುಕುಮಾರ್. ಶರೀಪ್. ಬಾಲಾಜಿ. ರಮೇಶ್. ಮೌನೇಶ್. ಲಕ್ಷ್ಮಣ. ಶಂಕರ್. ಕನಕಚಲ. ಲಕ್ಷ್ಮಿ. ರಂಜಿತಾ. ಭಾರ್ಗವಿ. ಸವಿತಾ ಅನೇಕರು ಉಪಸ್ಥಿತರಿದ್ದರು.