22 December 2024

ಕವಲೂರಿನಲ್ಲಿ ರಸ್ತೆಗಳನ್ನು ದುರಸ್ಥಿ ಮಾಡುವಂತೆ ಮಹಿಳಾ ಒಕ್ಕೂಟದಿಂದ ಬೃಹತ್ ಪ್ರತಿಭಟನೆ

  • ಕವಲೂರಿನಲ್ಲಿ ರಸ್ತೆಗಳನ್ನು ದುರಸ್ಥಿ ಮಾಡುವಂತೆ ಮಹಿಳಾ ಒಕ್ಕೂಟದಿಂದ ಬೃಹತ್ ಪ್ರತಿಭಟನೆ

ಕೊಪ್ಪಳ : ತಾಲೂಕಿನ ಕವಲೂರು ಗ್ರಾಮದಿಂದ ವಿವಿಧ ಮಾರ್ಗಗಳಿಗೆ ಸಂಪರ್ಕಿಸುವ ರಸ್ತೆಗಳು ಸುಮಾರು ವರ್ಷಗಳಿಂದ ದುರಸ್ಥಿ ಕಾಣದೇ ಇರುವದನ್ನು ಖಂಡಿಸಿ ಇಂದು ಕವಲೂರು ಗ್ರಾಮವನ್ನು ಬಂದ್ ಮಾಡಿ ಪ್ರತಿಭಟನೆ ಮಾಡಲಾಗಿದೆ ಎಂದು ಶ್ರೀ ಕಲ್ಪವೃಕ್ಷ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಮಹಿಳಾ ಒಕ್ಕೂಟದ ಅಧ್ಯಕ್ಷೆ ಗಂಗಮ್ಮ ಹೇಳಿದರು.

ಮಂಗಳವಾರ ಬೆಳಗ್ಗೆ ಆರಂಭವಾದ ಪ್ರತಿಭಟನೆಯು ಗ್ರಾಮದ ಪಂಚಲಿಂಗೇಶ್ವರ ದೇವಸ್ಥಾನದಿಂದ ಹೊಸ ಬಸ್ ನಿಲ್ದಾಣದವರೆಗೆ ಪಾದಯಾತ್ರೆ ಮಾಡಿ ಹೊಸ ಬಸ್ ನಿಲ್ದಾಣದಲ್ಲಿ ಸಭೆ ಸೇರಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಶ್ರೀ ಕಲ್ಪವೃಕ್ಷ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಮಹಿಳಾ ಒಕ್ಕೂಟದ ಕಾರ್ಯದರ್ಶಿ ಶೋಭಾ ಮಾತನಾಡಿ ಸುಮಾರು ವರ್ಷಗಳಿಂದ ನಮ್ಮ ಗ್ರಾಮದಿಂದ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿದ್ದು, ಈ ಕುರಿತು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಜನ ಪ್ರತಿನಿಧಿಗಳ ಗಮನಕ್ಕೆ ತಂದರು ಪ್ರಯೋಜವಾಗಿಲ್ಲಾ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ನಂತರ ವಿದ್ಯಾರ್ಥಿನಿ ರೇಣುಕಾ ಮಾತನಾಡಿ ಪ್ರತಿ ದಿನ ನಮ್ಮ ಗ್ರಾಮದಿಂದ ನೂರಾರು ವಿದ್ಯಾರ್ಥಿಗಳು ಪಕ್ಕದ ಗ್ರಾಮಗಳಾದ ಅಳವಂಡಿ, ಮುಂಡರಗಿ, ಕೊಪ್ಪಳ, ಗದಗ ಇನ್ನೀತರ ಕಡೆಗಳಲ್ಲಿ ವ್ಯಾಸಾಂಗಕ್ಕೆ ತೆರಳುತಿದ್ದು ಪ್ರತಿ ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದೆವೆ ಎಂದು ದೂರಿದರು.

ನಂತರದಲ್ಲಿ ಗ್ರಾಮದ ಮುಖಂಡರಾದ ಪ್ರದೀಪ್ ಗೌಡ್ರ ಮಾತನಾಡಿ ಈ ರೀತಿಯಾಗಿ ದುರಸ್ಥಿ ಕಾಣದ ರಸ್ತೆಗಳು ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದರು ಯಾವೊಬ್ಬ ಶಾಸಕರಾಗಲಿ, ಜನ ಪ್ರತಿನಿಧಿಗಳಾಗಲಿ ರಸ್ತೆಗಳನ್ನು ದುರಸ್ಥಿಗೊಳಿಸುವ ಗೋಜಿಗೆ ಹೋಗದಿರುವುದು ವಿಪರ್ಯಾಸವಾಗಿದೆ.

ನಮ್ಮ ಗ್ರಾಮದ ಸುತ್ತ ಮುತ್ತಲಿನ ಗ್ರಾಮಗಳಿಗೆ ಸಂಚಾರ ಮಾಡುವ ಸಂದರ್ಭಗಳಲ್ಲಿ ರಸ್ತೆಗಳಲ್ಲಿ ಮಾರುದ್ದದ ಗುಂಡಿಗಳು ಬಿದ್ದಿದ್ಧು ಹಲವಾರು ರಸ್ತೆ ಅಪಘಾತಗಳಾದ ನಿದರ್ಶನಗಳಿವೆ ಎಂದು ಕಿಡಿ ಕಾರಿದರು.

ಮುಂಡರಗಿಯಿಂದ ನಮ್ಮ ಗ್ರಾಮಕ್ಕೆ ಹಾಗೂ ನಮ್ಮ ಗ್ರಾಮದಿಂದ ವಿವಿದ ಗ್ರಾಮಗಳಿಗೆ ಸಂಚರಿಸಬೇಕು ಎಂದರೇ ನಮಗೆ ಜೀವವೇ ಹೋದಂತಾಗುತ್ತದೆ.

ಇಂತಹ ದುರಸ್ಥಿ ಕಾಣದ ಹದಗೆಟ್ಟ ರಸ್ತೆಗಳಿರುವದರಿಂದ ವಾಹನ ಮಾಲಕರು ಈ ರಸ್ತೆಗಳಿಗೆ ವಾಹನ ಬಿಡದೇ ಇರುವದರಿಂದ ಗ್ರಾಮಸ್ಥರು ಪ್ರತಿ ನಿತ್ಯ ಗೋಳಾಡುವಂತಾಗುತ್ತದೆ. ಇದಲ್ಲದೇ ಸಾರಿಗೆ ವಾಹನಗಳು ಆಗಾಗ ಬಂದ್ ಮಾಡಲಾಗುತ್ತಿದ್ದು ಸಾರ್ವಜನಿಕರು ಫಜೀತಿಗೆ ಸಿಲುಕುವಂತಾಗುತ್ತಿದೆ.

ನಮ್ಮ ಗ್ರಾಮದಲ್ಲಿ ಆಸ್ಪತ್ರೆ ಇದ್ದರೂ ಹೆಚ್ಚಿನ ಚಿಕಿತ್ಸೆಗಾಗಿ, ತುರ್ತು ಚಿಕಿತ್ಸೆಗಾಗಿ ಪಕ್ಕದ ನಗರಗಳಿಗೆ ತೆರಳಬೇಕೆಂದರೇ ಅರ್ಧ ಗಂಟೆ ಸಾಕು, ಆದರೆ ಇಂತಹ ಕೆಟ್ಟ ರಸ್ತೆಗಳಿರುವದರಿಂದ ಸಾವು ಬದುಕಿನ ನಡುವೆ ಜೀವನ ನಡೆಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ನಮ್ಮ ಪ್ರತಿಭಟನಾ ಸ್ಥಳಕ್ಕೆ ಬಂದು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲದಿದ್ದಲ್ಲಿ ಇನ್ನೂ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನಾ ಸ್ಥಳಕ್ಕೆ PWD ಇಲಾಖೆ ಮುಖ್ಯ ಇಂಜನೀಯರ ವೆಂಕಟೇಶ ಆಗಮಿಸಿ ಮಾತನಾಡಿ, ಕೂಡಲೇ ಎಲ್ಲಾ ರಸ್ತೆಗಳ ಗುಂಡಿಗಳನ್ನು ಮುಚ್ಚಿಸಿ ಸುಗಮ ಸಂಚಾರಕ್ಕೆ ಆನುಕೂಲ ಕಲ್ಪಿಸಿಕೊಡುತ್ತೇವೆ.

ರಸ್ತೆಗಳ ದುರಸ್ಥಿಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ದಿ ನಿಗಮಕ್ಕೆ ಅನುದಾನಕ್ಕೆ ಬೇಡಿಕೆ ಮನವಿ ಸಲ್ಲಿಸಲಾಗಿದ್ದು ಮುಂದಿನ ಕೆಲವೇ ದಿನಗಳಲ್ಲಿ ಕಾಮಗಾರಿಗಳನ್ನು ಕೈಗೊಂಡು ಉತ್ತಮ ರಸ್ತೆಗಳನ್ನು ಮಾಡಿಕೊಡಲಾಗುವುದು ಎಂದು ಮನವಿ ಪ್ರತಿಯನ್ನು ತೋರಿಸಿದರು.

ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಭರವಸೆ ನೀಡುವವರೆಗೆ ಪ್ರತಿಭಟನೆ ಹಿಂಪಡೆಯುವ ಮಾತೇ ಇಲ್ಲಾ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಅಳವಂಡಿ ಠಾಣಾ ಪಿಐ ಸೂಕ್ತ ಪೋಲಿಸ್ ಬಂದೋ ಬಸ್ತ ನಿಯೋಜನೆ ಮಾಡಿದ್ದರು.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷೆ ಗಂಗಮ್ಮ ಕಾರ್ಯದರ್ಶಿ ಶೋಭಾ ವಿವಿಧ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳಾದ ರೇಣುಕಾ, ಉಮಾ, ಸಾವಿತ್ರಿ, ಕಾರ್ಮಿಕ ಸಂಘದ ಮುಖಂಡರಾದ ರಾಜಾಸಾಬ ಮತ್ತು ಪ್ರಮುಖರಾದ ಪ್ರಭುಗೌಡ್ರ ಮಾಲಿಪಾಟೀಲ್ ಹಾಗೂ ಮುಖಂಡರು ಹಿರಿಯರು, ಯುವಕರು, ಸಂಘದ ಎಲ್ಲಾ ಮಹಿಳೆಯರು ಇದ್ದರು.

ಬೇಡಿಕೆಗಳು : ಕವಲೂರು ಗ್ರಾಮದಿಂದ ಮುಂಡರಗಿ ರಸ್ತೆ, ಅಳವಂಡಿ, ಬನ್ನಿಕೊಪ್ಪ, ಹಂದ್ರಾಳ, ಗುಡಿಗೇರಿ ರಸ್ತೆಗಳನ್ನು ಸರಿ ಪಡಿಸಿ ವಾಹನ ಸಂಚಾರಕ್ಕೆ ಸುಗಮ ಮಾರ್ಗಗಳನ್ನು ನಿರ್ಮಿಸಿಕೊಡಬೇಕು ಎನ್ನುವದು ಆಗ್ರಹವಾಗಿದೆ.